ಜಗದ್ಗುರು ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿ 1980 ರಲ್ಲಿ ಸ್ಥಾಪಿತವಾಗಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ, ಕಳೆದ 40 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಗಳನ್ನು ಅವಿರತವಾಗಿ ಮಾಡುತ್ತ ಬಂದಿದೆ. ಶ್ರೀಮಠದ ಆವರಣದಲ್ಲಿ ಶ್ರೀ ಮಹಾಮೇರು ಪಂಚಮುಖಿ ಗಣಪತಿಯನ್ನು ಅಧಿದೈವವಾಗಿ ಪ್ರತಿಷ್ಠಾಪಿಸಲಾಗಿದ್ದು, ನಕ್ಷತ್ರಾಕಾರದ ವಾಸ್ತು ರಚನೆಯ ಈ ಭವ್ಯ ದೇವಾಲಯ ಎಲ್ಲರ ಕಣ್ಮನ ಸೆಳೆಯುವಂತಿದೆ.

ಶ್ರೀಮಠದ ಒಂದು ಕಿರುನೋಟ

ಬೆಂಗಳೂರಿನ ಹೆಬ್ಬಾಗಿಲಿನಲ್ಲಿ ಜಗದ್ಗುರು ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳಿಂದ ಸ್ಥಾಪಿತವಾಗಿರುವ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠ, ನಾಲ್ಕು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಮಾಡುತ್ತಿದೆ. ಶ್ರೀ ಮಠದ ಆವರಣದ ಒಂದು ಪಕ್ಷಿನೋಟ ಇಲ್ಲಿದೆ.

ಜಗದ್ಗುರು ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳ ಕುರಿತು

ವಿಶ್ವ ಒಕ್ಕಲಿಗರ ಮಹಾಸಂಸ್ಥನ ಮಠವನ್ನು ಸ್ಥಾಪಿಸಿರುವ ಜಗದ್ಗುರು ಶ್ರೀ ಕುಮಾರ ಚಂದ್ರಶೇಖರನಾಥ ಮಹಾಸ್ವಾಮಿಗಳು ಜನಿಸಿದ್ದು 10.02.1945 ರಲ್ಲಿ. ಇವರ ತಂದೆ ಕೆ.ಆರ್.ಪೇಟೆಯ ಶ್ರೀ.ಕೆ.ವಿ.ತಿಮ್ಮೇಗೌಡರು, ತಾಯಿ ಶ್ರೀಮತಿ ಸಣ್ಣಮನವರು ದಿನಾಂಕ 25.02.1968 ರಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾಗಿದ್ದ ಪರಮಪೂಜ್ಯ ಶ್ರೀ ರಮಾನಂದನಾಥ ಮಹಾಸ್ವಾಮಿಗಳಿಂದ ಸಂನ್ಯಾಸ ದೀಕ್ಷೆಯನ್ನು ಪಡೆದಿದ್ದಾರೆ.  ಉನ್ನತ ವಿದ್ಯಾಭ್ಯಾಸಕ್ಕಾಗಿ 1968 ರ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರಿನ ತಿರುಚ್ಚಿ ಆಶ್ರಮದಲ್ಲಿ ಆಶ್ರಯಪಡೆದು 1979 ರಲ್ಲಿ ಆದ್ವೈತ ವೇದಾಂತದಲ್ಲಿ ವಿದ್ವತ್ ಪದವಿಯನ್ನು ಪಡೆದಿರುತ್ತಾರೆ 1980 ನವೆಂಬರ್ ತಿಂಗಳಿನಲ್ಲಿ ಶೂದ್ರ ಸಮುದಾಯಗಳ ಜಾಗೃತಿಯನ್ನು ಗುರಿಯಾಗಿಸಿಕೊಂಡು ಬೆಂಗಳೂರು ನಗರದ ಹೊರ ವಲಯದಲ್ಲಿರುವ ಕೆಂಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಖಾಸಗಿಯವರಿಂದ ತಮ್ಮ ಸ್ವಂತ ಹಣದಿಂದ ಜಮೀನನ್ನು ಖರೀದಿಸಿರುತ್ತಾರೆ. 20.11.1980 ರಂದು ಶ್ರೀ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠವನ್ನು ಸ್ಥಾಪಿಸಿರುತ್ತಾರೆ. 

ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕವಾಗಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಾ ಈ ನಾಡಿನ ಹಿರಿಯ ಯತಿಗಳಲ್ಲಿ ಒಬ್ಬರೆನಿಸಿದ್ದಾರೆ.  ಪೂಜ್ಯರು ಕಾಯಕ ಯೋಗಿಗಳಾಗಿದ್ದು, ದಣಿವರಯದೆ ದುಡಿದು ವಿಶ್ವ ಒಕ್ಕಲಿಗರ ಮಹಾಸಂಸ್ಥನ ಮಠವನ್ನು ಕಟ್ಟಿ ಬೆಳೆಸಿದ್ದಾರೆ.  ಶ್ರೀಮಠದಲ್ಲಿ ಸುಪ್ರಸಿದ್ದ ಶ್ರೀ ಮಹಾಮೇರು ಪಂಚಮುಖಿ ಗಣಪತಿಯನ್ನು ಅಧಿದೈವವಾಗಿ ಪ್ರತಿಷ್ಠಪಿಸಿದ್ದಾರೆ.  ನಕ್ಷತ್ರಾಕಾರದ ವಾಸ್ತು ರಚನೆಯ ಈ ಬೃಹತ್ ದೇವಾಲಯ ಪ್ರೇಕ್ಷಣಿಯ ಸ್ಥಳವಾಗಿದೆ.  ಈ ಭಾಗದ ಜನರಿಗೆ ಉನ್ನತ ವಿದ್ಯಾಭ್ಯಾಸ ನೀಡಬೇಕೆಂಬ ಸದುದ್ದೇಶದಿಂದ ಶಾಲೆ, ಕಾಲೇಜುಗಳನ್ನು ಸ್ಥಾಪಿಸಿರುವ ಪೂಜ್ಯರು ಉಚಿತ ವಿದ್ಯಾರ್ಥಿನಿಲಯ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಅನಾಥಾಶ್ರಮ, ವೃದ್ದಾಶ್ರಮ ಮುಂತಾದವುಗಳನ್ನು ಸ್ಥಾಪಿಸುವ ಧ್ಯೇಯವಿರಿಸಿಕೊಂಡು ಮುನ್ನಡೆಯುತ್ತಿದ್ದಾರೆ, ತ್ರಿವಿಧ ದಾಸೋಹದ ಮೂಲಕ ಶ್ರೀಮಠದ ಸೇವೆ ವಿಸ್ತಾರಗೊಳ್ಳಬೇಕೆಂಬ ಆಶಯದೊಂದಿಗೆ ಶ್ರೀ ಗುರುಜ್ಞಾನ ಕೇಂದ್ರ ಟ್ರಸ್ಟ್‍ನ ಧರ್ಮದರ್ಶಿಗಳು ಮತ್ತು ಶ್ರೀಮಠದ ಸದ್ಬಕ್ತರ ಅಪೇಕ್ಷೆಯಂತೆ ತಮ್ಮ ಉತ್ತರಾಧಿಕಾರಿಯನ್ನು ನೇಮಿಸಲು ತೀರ್ಮಾನಿಸಿದ್ದಾರೆ.

ಜಗದ್ಗುರು ಶ್ರೀ ನಿಶ್ಚಲಾನಂದನಾಥ ಸ್ವಾಮಿಗಳಾಗಿ ದೀಕ್ಷೆಪಡೆಯುತ್ತಿರುವ ಡಾ. ಎಚ್. ಎಲ್. ನಾಗರಾಜ್ ರವರ ಕುರಿತು

ಶ್ರೀ ಮಠದ ಉತ್ತರಾಧಿಕಾರಿಯಾಗಿ ನಿಯೋಜಿತರಾಗಿರುವವರು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಶ್ರೀ ಲಿಂಗಯ್ಯ ಮತ್ತು ಶ್ರೀ ಮತಿ ಗಂಗಮ್ಮ ಇವರ ಸುಪುತ್ರರಾದ ಡಾ.ಹೆಚ್.ಎಲ್.ನಾಗರಾಜ್ ರವರು. ಶ್ರೀಯುತರು ಅರ್ಥಶಾಸ್ತ್ರದಲ್ಲಿ ಎಂ.ಎ., ಎಂ.ಫಿಲ್, ಪಿ.ಹೆಚ್.ಡಿ ಪದವೀಧರರಾಗಿದ್ದಾರೆ.  ಎರಡು ಸ್ನಾತ್ತಕೋತ್ತರ ಡಿಪ್ಲೋಮಾಗಳಲ್ಲಿ ತೇರ್ಗಡೆಯಾಗಿದ್ದಾರೆ.  2006 ರಲ್ಲಿ ಕೆ.ಎ.ಎಸ್ ಅಧಿಕಾರಿಯಾಗಿ ಆಯ್ಕೆಯಾಗಿ ಅನೇಕ ಸ್ಥಳಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.  ಐದು ಉಪಯುಕ್ತ ಕೃತಿಗಳನ್ನು ಬರೆದು ಪ್ರಕಟಿಸುವ ಮೂಲಕ ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ.  ರಾಜ್ಯ ಸರ್ಕಾರದಿಂದ ಹಾಗೂ ಸಂಘ ಸಂಸ್ಥೆಗಳಿಂದ ಹತ್ತಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ, ಹಾಲಿ ಮಂಡ್ಯ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿ ಮತ್ತು ಹೆಚ್ಚುವರಿಯಾಗಿ ಮಂಡ್ಯ ಮೈ ಶುಗರ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅತ್ಯಂತ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಜನ ಮೆಚ್ಚುಗೆ ಪಡೆದಿದ್ದಾರೆ. 

 ಸರಳತೆ, ಸಜ್ಜನಿಕೆ ಕ್ರಿಯಾಶೀಲತೆ, ನಿಷ್ಕಳಂಕ ವೈಕ್ತಿತ್ವ ಹೊಂದಿರುವ ಶ್ರೀಯುತರು ಶ್ರೀಮಠದ ಮೂಲಕ ನಾಡಿನ ಸೇವೆಗಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಳ್ಳುತ್ರಿರುವುದು ಶ್ರೀಮಠಕ್ಕೆ ಹೆಮ್ಮೆಯ ವಿಷಯವಾಗಿದೆ.  ನಿಯೋಜಿತ ಉತ್ತರಾಧಿಕಾರಿಗಳು ಭಾರತದ ಸಂವಿಧಾನವನ್ನು ಆದರ್ಶವಾಗಿಟ್ಟುಕೊಂಡು, ಸಮಸಮಾಜ ನಿರ್ಮಾಣದ ಗುರಿಯೊಂದಿಗೆ, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಸಾಮಾಜಿಕ ನ್ಯಾಯದೊಂದಿಗೆ, ‘ಸರ್ವಜನಾಂಗದ ಶಾಂತಿಯ ತೋಟ’ ವೆಂಬ ಉದಾತ್ತ ದೃಷ್ಟಿಯೊಂದಿಗೆ, ರಾಷ್ಟ್ರಕವಿ ಕುವೆಂಪುರವರ ‘ವಿಶ್ವಮಾನವ ಸಂದೇಶ’ದಂತೆ ಮನುಜಮತ, ವಿಶ್ವಪಥ, ಸರ್ವೋದಯ ಸಮನ್ವಯ ಮತ್ತು ಪೂರ್ಣದೃಷ್ಡಿಯ ಉನ್ನತ ಭಾವನೆಗಳನ್ನು ಜನಸಮುದಾಯದಲ್ಲಿ ಮೂಡಿಸಿ ಮಾನವತಾವಾದದ ನೆಲೆಗಟ್ಟಿನ ಮೇಲೆ ಸಮಾಜ ಸೇವೆ ಮಾಡಲು ಸಂಕಲ್ಪ ಮಾಡಿರುವುದು ಅಭಿನಂದನಾರ್ಹ.

ಮಠದ ವಿಳಾಸ